ಶ್ರೀರಾಮ ವಿದ್ಯಾಕೇಂದ್ರದ ಕಲ್ಲಡ್ಕದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ ಇದರ ಸಹಕಾರದಿಂದ ನೂತನವಾಗಿ ನಿರ್ಮಿಸಿದ ಪಾಕಶಾಲಾ ಸಮುಚ್ಚಯ ಇಂದು ಉದ್ಘಾಟನೆಗೊಂಡಿತು. ಎರಡು ಭೋಜನಾಲಯ, ಒಂದು ಅಡುಗೆ ಶಾಲೆ ಹಾಗೂ ಕಚೇರಿ, ಉಗ್ರಾಣವನ್ನೊಳಗೊಂಡ ೪ ಮಹಡಿಯುಳ್ಳ ಕಟ್ಟಡವಾಗಿದೆ. ಇಲ್ಲಿ ೫೦೦೦ಜನರಿಗೆ ಏಕಕಾಲದಲ್ಲಿ ಅಡುಗೆ ಸಿದ್ಧಪಡಿಸಬಹುದಾಗಿದೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರಂಭಗೊಂಡ ಕಾರ್‍ಯಕ್ರಮದಲ್ಲಿ, ಅತಿಥಿಗಳು ಗಂಟೆ ಬಾರಿಸಿದಾಗ ಮುಖ್ಯ ದ್ವಾರದ ಪರದೆ ಪಕ್ಕಕ್ಕೆ ಸರಿಯುವ ಮೂಲಕ ಕಟ್ಟಡವು ಉದ್ಘಾಟನೆಗೊಂಡಿತು.
ನಂತರ ನಡೆದ ಸಭಾ ಕಾರ್‍ಯಕ್ರಮದಲ್ಲಿ ವಿದ್ಯಾಕೇಂದ್ರದ ಸಂಚಾಲಕರು ವಸಂತ ಮಾಧವ ಪ್ರಾಸ್ತಾವಿಕ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ೧೦ನೇ ತರಗತಿಯವರೆಗೆ ಕಲಿಯಲು ಅಸಾಧ್ಯವಾಗಿರುವ ಸಂದರ್ಭದಲ್ಲಿ ಈ ಶ್ರೀರಾಮ ವಿದ್ಯಾಕೇಂದ್ರ ಆರಂಭವಾಯಿತು. ಎಲ್ಲರ ವ್ಯಕ್ತಿತ್ವ ವಿಕಸನ ಆಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಶಿಶುಮಂದಿರ, ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿಯವರೆಗೆ ಸಂಸ್ಕಾರಯುತವಾದ ಶಿಕ್ಷಣ ನೀಡುತ್ತಾ ಬಂದಿದೆ. ಸರಕಾರ ಪ್ರಾರಂಭ ಮಾಡುವ ಮೊದಲೇ ನಮ್ಮ ವಿದ್ಯಾಕೇಂದ್ರದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಹುಟ್ಟಿದ ತಕ್ಷಣ ಆಹಾರ ಬೇಕಾಗುತ್ತದೆ. ನಂತರ ತಿಳುವಿಕೆಗೋಸ್ಕರ ವಿದ್ಯಾಭ್ಯಾಸ ಅತೀ ಮುಖ್ಯ. ಇದನ್ನು ಸರಕಾರ ಮಾಡುತ್ತಾ ಬಂದಿದೆ. ಇದು ಮಕ್ಕಳ ಹಕ್ಕು ಕೂಡಾ ಹೌದು. ಒಂದು ಹೊಟ್ಟೆಗೆ, ಇನ್ನೊಂದು ಮೆದುಳಿಗೆ ಇದು ಎರಡೇ ಆದರೆ ಮಾನವ ರಾಕ್ಷಸ ಆಗುತ್ತಾನೆ. ಹೃದಯಕ್ಕೆ ಬೇಕಾದಂತಹ ಸಂಸ್ಕಾರವನ್ನು ನೀಡುವ ಕಲೆ ಇದ್ರೆ ಮಾತ್ರ ಆತ ಜ್ಞಾನಿ ಆಗಲು ಸಾಧ್ಯ. ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳಿಂದ ವಿದ್ಯಾರ್ಥಿಗಳು, ಹಿಂದೂ ಸಮಾಜ ವಂಚಿತರಾಗಿದ್ದಾರೆ. ಅದಕ್ಕಾಗಿ ಈ ವಿದ್ಯಾಸಂಸ್ಥೆ ಆರಂಭವಾಯಿತು.
ಮುಖ್ಯ ಅತಿಥಿಯಾಗಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ| ಭೀಮೇಶ್ವರ ಜೋಶಿ ದಂಪತಿಗಳು ಉಪಸ್ಥಿತರಿದ್ದು ಕಾರ್‍ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಆರೋಗ್ಯವೇ ನನ್ನ ಆರೋಗ್ಯ. ವಿದ್ಯಾರ್ಥಿಗಳ ಆರೋಗ್ಯವೇ ನನ್ನ ಬದುಕಿನ ಗುರಿ ಎಂಬ ಭಾವನೆ ಇಟ್ಟುಕೊಂಡವರು ಡಾ| ಪ್ರಭಾಕರ ಭಟ್ ಎಂದು ಅವರು ಹೇಳಿದರು. ಶ್ರೀರಾಮನ ಆದರ್ಶ, ಗುರುಕುಲ ಪದ್ಧತಿ ವ್ಯವಸ್ಥೆ, ಉತ್ತಮ ಸಂಸ್ಕಾರದ ನೀರನ್ನು ಹಾಕಿ ಗಿಡವಾಗಿ ಬೆಳೆಸಿದ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಾ ಬಂದಿದೆ. ನಿಜಕ್ಕೂ ಇದು ಹೆಮ್ಮೆ ಸಂಸ್ಥೆ ಎಂದು ಹೇಳಿದರು. ಭಾರತದಲ್ಲಿ ಶಾಲೆಗಳು ಹಲವಾರು ಇದೆ. ಆದರೆ ಸಂಸ್ಕಾರವನ್ನು ನೀಡುವಂತಹ ಶಿಕ್ಷಣವೆಂದರೆ ಅದು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಎಂದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಇದರ ಅಧ್ಯಕ್ಷರಾದ ಡಾ ಸಿ. ಸೋಮಶೇಖರ ವಹಿಸಿದ್ದರು. ಧರ್ಮ ಉಳಿದರೆ ನಾವು ಉಳಿಯಲು ಸಾಧ್ಯ ಎಂಬುದು ಡಾ| ಪ್ರಭಾಕರ ಭಟ್‌ರವರ ಕೂಗು. ಅಕ್ಷರ ಜ್ಞಾನ ಬಹುದೊಡ್ಡ ಸಂಪತ್ತು, ಜ್ಞಾನ ದಾಸೋಹದ ಪವಿತ್ರ ಕ್ಷೇತ್ರ ಶ್ರೀರಾಮ ವಿದ್ಯಾಸಂಸ್ಥೆ. ಹಸಿದ ಹೊಟ್ಟೆಗೆ ಅನ್ನವನ್ನು ನೀಡುವ ವಿದ್ಯಾಸಂಸ್ಥೆ ಇದಾಗಿದೆ.
ವೇದಿಕೆಯಲ್ಲಿ ಸಾಧ್ವಿ ಶ್ರೀ ಮಾತಾನಂದಮಯೀ, ಶ್ರೀ ಗುರುದತ್ತ ಸಂಸ್ಥಾನ್, ಶ್ರೀ ಕ್ಷೇತ್ರ ಒಡಿಯೂರು ಇವರು ಮಾತನಾಡಿ ಬೆಳಕು ಎಂದರೆ ಸಂಸ್ಕೃತಿ, ಇದನ್ನು ಉಳಿಸಿ ಬೆಳೆಸುವ ಕಾರ್‍ಯ ಆಗಬೇಕು. ಈ ಕಾರ್‍ಯವನ್ನು ಈ ಸಂಸ್ಥೆ ಮಾಡುತ್ತಾ ಬಂದಿದೆ ಎಂದರು. ತ್ಯಾಗ, ಸೇವೆ ದೇಶದ ಆದರ್ಶ. ಧರ್ಮವೇ ನಮ್ಮ ದೇಶದ ಸತ್ವ. ತ್ಯಾಗ, ಸೇವೆ, ಮನೋಭಾವವನ್ನು ಯಾವಾಗ ಅಳವಡಿಸುತ್ತೇವೆ ಆಗ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಕಾರ್‍ಯಕ್ರಮದ ಕೊನೆಯಲ್ಲಿ ಪದವಿ ಪರೀಕ್ಷೆಯಲ್ಲಿ ೯ನೇರ್‍ಯಾಂಕ್‌ಗಳಿಸಿದ ಆದಿತ್ಯ ಕೆ ಮತ್ತು ಕಟ್ಟಡ ನಿರ್ಮಾಣಕ್ಕೆ ಇಂಜಿನಿಯರ್ ಆಗಿ ಸಹಕರಿಸಿದ ರಾಮ್‌ಪ್ರಸಾದ್ ಇವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನ, ಶ್ರೀ ಕ್ಷೇತ್ರ ಕೊಲ್ಲೂರು ಇದರ ಅಧ್ಯಕ್ಷರಾದ ಡಾ| ಚಂದ್ರಶೇಖರ ಶೆಟ್ಟಿ ಕೆರಾಡಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇದರ ಕಾರ್‍ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಡಾ| ಕಮಲಾ ಪ್ರ. ಭಟ್ ಉಪಸ್ಥಿತರಿದ್ದರು.