ಶ್ರೀರಾಮ ವಿದ್ಯಾಕೇಂದ್ರವು ಪ್ರತಿವರ್ಷವೂ ಹಮ್ಮಿಕೊಳ್ಳುವ, ಶ್ರೀರಾಮ ಪದವಿ ಕಾಲೇಜಿನ ಆಶ್ರಯದಲ್ಲಿ ನಡೆಯುವ ರಾಷ್ಟ್ರೀಯ ವಿಚಾರ ಸಂಕಿರಣವು (13ನೇ) “ಪ್ರಚಲಿತ ಭಾರತ- ಸತ್ಯ ಮಿಥ್ಯೆ” ಎಂಬ ವಿಷಯದ ಕುರಿತು ತಾ. 25/02/2025ರಂದು ಪದವಿ ವಿಭಾಗದ ಆಜಾದ್ ಭವನದಲ್ಲಿ ನಡೆಯಿತು.
ಪ್ರತಿವರ್ಷವೂ ದೇಶದ ಹಿತಚಿಂತನೆಯ ವಿಷಯದ ಕುರಿತು ವೈಚಾರಿಕ ಗೋಷ್ಠಿಗಳು ನಡೆಯುತ್ತಿದ್ದು ಈ ವರ್ಷ ಪ್ರಸಕ್ತ ಭಾರತದ ವಿದ್ಯಮಾನಗಳ ಮಿಥ್ಯೆಗಳನ್ನು ಬೆಳಕಿಗೆ ತರುವ ಮೂಲಕ ಆಗುಹೋಗುಗಳ ನಿಜಾಂಶಗಳ ಕುರಿತು ಚಿಂತನೆ ನಡೆಸಲಾಯಿತು.
ಉಡುಪಿ- ಮಂಗಳೂರುಗಳಲ್ಲಿ ಐಪಿಎಸ್ ಅಧಿಕಾರಿಯಾಗಿ ತಮ್ಮ ದಕ್ಷತೆ- ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತರಾಗಿ, ಪ್ರಸ್ತುತ ತಮಿಳು ನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷರು, ಯುವ ನಾಯಕರು, ಪ್ರಗತಿಪರ ಕೃಷಿಕರಾದ ಶ್ರೀ ಅಣ್ಣಾಮಲೈ ಕೆ. ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ್ದು ಈ ಬಾರಿಯ ವಿಶೇಷತೆಯಾಗಿತ್ತು.
ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ಜೊತೆಗೆ ವಾತಾವರಣ ಶುದ್ಧಗೊಳಿಸುವ ಅಗ್ನಿಹೋತ್ರ ನಡೆಯಿತು.
ವಿದ್ಯಾಕೇಂದ್ರದ ಅಧ್ಯಕ್ಷ ಶ್ರೀ ನಾರಾಯಣ ಸೋಮಯಾಜಿಯವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಪ್ರಸ್ತಾವಿಕ ನುಡಿಗಳನ್ನಾಡುತ್ತಾ ಕಟ್ಟು ಕಥೆಗಳ ಮೂಲಕ ಸಮಾಜದ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದ್ದು, ಇವುಗಳ ನಿಜಾಂಶ ತಿಳಿದುಕೊಂಡು ಇಂದಿನ ಯುವ ಜನತೆ ಎಚ್ಚೆತ್ತುಕೊಂಡರೆ ಮಾತ್ರ ದೇಶದ ಉನ್ನತಿ ಸಾಧ್ಯ ಎಂದು ನುಡಿದರು.
ಭಗವದ್ಗೀತೆ, ಪುರಾಣ ಗ್ರಂಥಗಳಿಗೆ ಆರತಿ ಎತ್ತಿ ಅರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಅಣ್ಣಾಮಲೈ ಉದ್ಘಾಟನಾ ಭಾಷಣದ ಜೊತೆಗೆ “ನನ್ನ ದೇಶ- ನನ್ನ ಹೊಣೆ” ಎಂಬ ವಿಷಯದ ಕುರಿತು ಪ್ರಸ್ತುತಪಡಿಸುತ್ತಾ ಯುವಜನತೆಯು ಶಿವಾಜಿ ಮಹಾರಾಜರಂತಹ ಶ್ರೇಷ್ಠ ವ್ಯಕ್ತಿಗಳ ಆದರ್ಶಗಳನ್ನಿಟ್ಟುಕೊಂಡು ದೇಶಸೇವೆ ಮಾಡಬೇಕು. ನನ್ನ ದೇಶ ಭಾರತ ಎಂಬ ಭಾವನೆ ಎಲ್ಲರಲ್ಲಿಯೂ ಮನೆ ಮಾಡಬೇಕು. ಭಾರತದ ಸಾಂಸ್ಕೃತಿಕ ವೈಭವವನ್ನು ತಿಳಿಯಬೇಕು, ಭಾಷೆ, ಸಂಸ್ಕೃತಿ, ಜಾತಿ-ಮತ ಭೇದವಿದ್ದರೂ ಸಾಮರಸ್ಯದ ಜೀವನ ಅನಿವಾರ್ಯ, ವಿವಿಧತೆಯಲ್ಲಿ ಏಕತೆ ನಮ್ಮ ಮಂತ್ರವಾಗಬೇಕು ಎಂದು ನುಡಿದರು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ದೇಶದ ಮೇಲೆ ಬದ್ಧರಾಗಿ ದೇಶದ ಹಿತಚಿಂತನೆಯನ್ನು ನಡೆಸುವುದು ಭಾರತೀಯರ ಆದ್ಯ ಕರ್ತವ್ಯ ಎಂಬ ವಿಚಾರವನ್ನು ಮನಮುಟ್ಟುವಂತೆ ತಿಳಿಸಿದರು.
ಉದ್ಘಾಟನೆಯ ನಂತರ 3 ಗೋಷ್ಠಿಗಳನ್ನು ನಡೆಸಲಿರುವ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಇತಿಹಾಸ ಸಂಶೋಧಕ ಡಾ. ವಿಕ್ರಮ್ ಸಂಪತ್, ಬೆಂಗಳೂರಿನ ನ್ಯಾಯವಾದಿಗಳಾದ ಶ್ರೀಮತಿ ಕ್ಷಮಾ ನರಗುಂದ, ಕಾರ್ಕಳದ ಸಮಾಜಸೇವಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜು ಪ್ರಾಚಾರ್ಯ ಹಾಗೂ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪ್ರಸಾದ್ ಕಾಯರಕಟ್ಟೆ ಗಣ್ಯರನ್ನು ಸ್ವಾಗತಿಸಿದರು. ವಿದ್ಯಾಕೇಂದ್ರದ ಸಂಚಾಲಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶ್ರೀ ವಸಂತ ಮಾಧವ, ಪ್ರಾಚಾರ್ಯ ಕೃಷ್ಣ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂತಿಮ ಬಿಕಾಂ ವಿದ್ಯಾರ್ಥಿನಿ ಕು. ಪುನೀತಾ ಕಾರ್ಯಕ್ರಮ ನಿರ್ವಹಿಸಿದರು, ಬಿಸಿಎ ವಿದ್ಯಾರ್ಥಿನಿ ಕು. ಸ್ವಾತಿಲಕ್ಷ್ಮಿ ವಂದಿಸಿದರು.