ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸರಸ್ವತಿ ಮಂಟಪ ಲೋಕಾರ್ಪಣೆ – 13.10.2025
ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕ ಇಲ್ಲಿ ಸರಸ್ವತಿ ಮಂಟಪದ ಲೋಕಾರ್ಪಣೆಯು ಶೃಂಗೇರಿ ಶಾರದಾಪೀಠಾಧೀಶ್ವರರಾದ ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು, ಇವರ ದಿವ್ಯಹಸ್ತದಿಂದ ನೆರವೇರಿತು.
ಶ್ರೀರಾಮ ಶಿಶುಮಂದಿರ ಹಾಗೂ ಶ್ರೀರಾಮ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ಸರಸ್ವತಿ ಮಂಟಪವನ್ನು ಪರದೆ ಸರಿಸಿ ಅನಾವರಣಗೊಳಿಸಿ ಪೂಜೆ ಸಲ್ಲಿಸಿ ಶೃಂಗೇರಿ ಶಾರದಾಪೀಠಾಧೀಶ್ವರರಾದ ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ಲೋಕಾರ್ಪಣೆಗೈದರು. ನಂತರ ಶಿಶುಮಂದಿರ ಮತ್ತು ಪೂರ್ವಗುರುಕುಲದ ಪುಟಾಣಿಗಳ ಚಟುವಟಿಕೆಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿದರು. ಇದೇ ಸಂದರ್ಭದಲ್ಲಿ ಶ್ರೀರಾಮ ಇಂಗ್ಲೀಷ್ ಮಾಧ್ಯಮ ಶಾಲೆಯ ನೂತನ ಸಭಾಭವನ – ‘ಶಂಕರಾಚಾರ್ಯ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವನ್ನು ವೀಕ್ಷಿಸಿದರು.
ಬಳಿಕ ಕಲ್ಲಡ್ಕ ಶ್ರೀರಾಮ ಮಂದಿರದ ರಾಮಾಂಗಣದಲ್ಲಿ ಸಭಾ ಕಾರ್ಯಕ್ರಮವು ನೆರವೇರಿತು. ತದನಂತರ ವಿದ್ಯಾಕೇಂದ್ರದ ದೈನಂದಿನ ಚಟುವಟಿಕೆಯಾದ ಸರಸ್ವತಿ ವಂದನೆಯ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗಣ್ಯರನ್ನು ಸ್ವಾಗತಿಸಿದರು.
ಪರಮಪೂಜ್ಯ ಶ್ರೀಸಂಸ್ಥಾನದವರು ತಮ್ಮ ಶುಭಾಶೀರ್ವಾದಗಳೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ವಿದ್ಯೆಯ ಜೊತೆಗೆ ಸಂಸ್ಕಾರವು ವ್ಯಕ್ತಿಗೆ ಭೂಷಣ, ಶಿಕ್ಷಣದ ಜೊತೆಗೆ ಸಂಸ್ಕಾರಕ್ಕೂ ಪ್ರಾಶಸ್ತ್ಯ ನೀಡುತ್ತಾ ಧರ್ಮದ ರಕ್ಷಣೆಯಲ್ಲಿ ತೊಡಗಬೇಕು. ಧರ್ಮವೇ ಮಾನವರಿಗೆ ಆಧಾರ. ಕಾಲವು ಬದಲಾದರೂ ಧರ್ಮದ ಪ್ರಾಮುಖ್ಯತೆ ಕಡಿಮೆಯಾಗದು ಎಂದು ಹೇಳುತ್ತಾ ಆಶೀರ್ವಚನ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಭೋದನ್ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮುಂಬೈ ಉದ್ಯಮಿಗಳಾದ ರವಿಕಾಂತ ಮಿಶ್ರ, ಮತ್ತು ಶ್ರೀ ವಿಜಯ ಕಲಾಂತ್ರಿ, ನವದೆಹಲಿಯ ಉದ್ಯಮಿಗಳಾದ ಶ್ರೀ ಸಿದ್ಧಾರ್ಥ, ಬೆಂಗಳೂರಿನ ಉದ್ಯಮಿಗಳಾದ ಶ್ರೀಮತಿ ಅಂಜನಾ ಕಿಣಿ, ಶ್ರೀ ಗಿರೀಶ್ ರಾವ್, ಬಾಲಕೃಷ್ಣ ಭಂಡಾರಿ, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.
